ರಂಗನತಿಟ್ಟು ಪಕ್ಷಿಧಾಮ - ಭಾರತದ ಪ್ರಮುಖ ಪಕ್ಷಿಧಾಮಗಳ (ಬರ್ಡ್ ಸ್ಯಾಂಕ್ಚುಯರೀಸ್) ಪೈಕಿ ಒಂದು. ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿಗೆ ಸೇರಿದ. ಶ್ರೀರಂಗಪಟ್ಟಣದ ಪಶ್ಚಿಮಕ್ಕೆ 3 ಕಿಮೀ ದೂರದಲ್ಲೂ ಮೈಸೂರು ನಗರದ ವಾಯುವ್ಯಕ್ಕೆ ಸುಮಾರು 18 ಕಿಮೀ ದೂರದಲ್ಲೂ ಇದೆ. ಇದು ಕಾವೇರಿ ನದಿಯ ಒಂದು ಚಿಕ್ಕ ದ್ವೀಪಸಮೂಹ. ಶ್ರೀರಂಗಪಟ್ಟಣದ ಆದಿದೈವ ಶ್ರೀರಂಗನಾಥಸ್ವಾಮಿಯ ಗೌರವಾರ್ಥ ಪಕ್ಷಿಧಾಮಕ್ಕೆ ಈ ಹೆಸರು ಬಂದಿದೆ. ದ್ವೀಪಸಮೂಹ ಸುಮಾರು 67 ಹೆಕ್ಟೇರುಗಳ ಪ್ರದೇಶವನ್ನು ಒಳಗೊಂಡಿದೆ. ಕಾವೇರಿನದಿ ಇಲ್ಲಿ ಇಬ್ಭಾಗವಾಗಿ ಸುಮಾರು 4 ಫರ್ಲಾಂಗುಗಳ  ದೂರ ಹರಿದು ಮತ್ತೆ ಕೂಡಿಕೊಳ್ಳುತ್ತದೆ. ಹಿಂದಿನ ಮೈಸೂರು ರಾಜ್ಯದ ದೊರೆಯಾಗಿದ್ದ ಕಂಠೀರವ ನರಸರಾಜ ಒಡೆಯರ್ ಅವರ ಆಳ್ವಿಕೆಯ ಸಮಯದಲ್ಲಿ, ಸುಮಾರು 1645-48ರ ಅವಧಿಯ ನಡುವೆ ಕಾವೇರಿ ನದಿಗೆ ಒಂದು ಅಡ್ಡಗಟ್ಟೆ (ಒಡ್ಡು) ನಿರ್ಮಿಸಲಾಗಿ ಉಂಟಾದ ಜಲಾಶಯದ ನಡುವೆ ಸಣ್ಣ ಸಣ್ಣ ಕಿರುದ್ವೀಪಗಳು ಏರ್ಪಟ್ಟಿವೆ. ಈ ನದಿಸುತ್ತಿನ ಮಧ್ಯದಲ್ಲಿರುವ ಸುಮಾರು ಒಂದೂವರೆ ಫರ್ಲಾಂಗಿನಷ್ಟು ಅಗಲವಿರುವ, ಸುಣ್ಣಕಲ್ಲಿನ ಭೂಮಿಯೇ  ಇಲ್ಲಿನ ಮುಖ್ಯ  ದ್ವೀಪ. ಈ ದ್ವೀಪದೊಳಗೆ ಮರಗಳು  ವಿರಳವಾಗಿ ಬೆಳೆದಿವೆ. ಜನವಸತಿ ಇಲ್ಲದೆ ಈ ಪ್ರದೇಶದ ಸುತ್ತಲೂ ಗದ್ದೆಬಯಲುಗಳು ಇದ್ದು, ನದಿಯ ಎರಡೂ ದಂಡೆಗಳಲ್ಲಿ ಸದಾ ಹಸುರಾಗಿರುವ ವಿವಿಧ ಮರಗಿಡಗಳು ಬೆಳೆದಿವೆ.

ಈ ಪಕ್ಷಿಧಾಮದಲ್ಲಿನ ಪಕ್ಷಿಗಳಿಗೆ ಪ್ರಕೃತಿದತ್ತ ರಕ್ಷಣೆ ಮತ್ತು ಆಹಾರ ಎರಡೂ ಲಭ್ಯವಿರುವುದರಿಂದ ಪ್ರಪಂಚದ ನಾನಾ ಭಾಗಗಳಿಂದ ಪಕ್ಷಿಗಳು ವಲಸೆ ಬರುತ್ತವೆ. ಪಕ್ಷಿಗಳ ಆಗಮನ, ಗೂಡುಕಟ್ಟುವಿಕೆ, ಮರಿ ಮಾಡುವಿಕೆ, ಇತ್ಯಾದಿಗಳನ್ನು ಗಮನಿಸಿದ ಭಾರತದ ಪ್ರಸಿದ್ಧ ಪಕ್ಷಿವಿe್ಞÁನಿ ಡಾ. ಸಲೀಂ ಅಲಿ (1896-1987) ಅವರ ಶಿಫಾರಸ್ಸಿನ ಮೇಲೆ ಈ ಸ್ಥಳ ಪಕ್ಷಿಧಾಮ ಪಟ್ಟ ಪಡೆಯಿತು (1940).  ಜುಲೈ- ಅಕ್ಟೋಬರ್ ತಿಂಗಳುಗಳ ಅವಧಿಯಲ್ಲಿ ಪಕ್ಷಿಸಂಕುಲ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಇದು ಪಕ್ಷಿಗಳು ಮರಿಮಾಡುವ  ಕಾಲ. ಈ  ಪಕ್ಷಿಧಾಮದಲ್ಲಿ ಗೊರವಂಕ, ಗಿಳಿ, ಚಮಚಮುಖಿ, ಬುಲ್‍ಬುಲ್, ಕಾಜಾಣ, ಗೀಜಗ, ಸೂರಕ್ಕಿ, ಚಂಬುಕುಟಿಗ, ಮೀಂಚುಳ್ಳಿ, ಗರುಡ, ನೀರುಕಾಗೆ, ಕಳ್ಳೀಪೀರ, ದೇವನಹಕ್ಕಿ, ಕೌಜುಗ, ಜಂಗಲ್ ಬಾಬ್ರ್ಲರ್, ರಾಬಿನ್, ಪ್ಲೈಕ್ಯಾಚರ್, ಫ್ಲವರ್‍ಪೆಕರ್, ಕಪ್ಪು ಮತ್ತು ಬಿಳಿ ಐಬಿಸ್, ಕ್ರಾಸ್‍ಬಿಲ್, ಓಪನ್ ಬಿಲ್, ಹ್ವೈಟ್‍ನೆಕ್ಡ್ ಕ್ರೇನ್, ಬಣ್ಣದ ಕೊಕ್ಕರೆ, ಮುಂತಾದ ವಿವಿಧ ಜಾತಿಯ, ಗಾತ್ರದ ಮತ್ತು ಬಣ್ಣಗಳ ಪಕ್ಷಿಗಳನ್ನು ಕಾಣಬಹುದು. ನದಿನೀರಿನ ಒಳಗೆ ಇರುವ ಮೊಸಳೆಗಳು ಆಗೊಮ್ಮೆ ಈಗೊಮ್ಮೆ ಬಂಡೆಗಳ ಮೇಲೆ ಬಂದು ಬಿಸಿಲು ಕಾಸುತ್ತಿರುವ ದೃಶ್ಯವೂ ಸಾಮಾನ್ಯ.

ಇಲ್ಲಿಗೆ ವಲಸೆಬರುವ ಪಕ್ಷಿಗಳ ಪೈಕಿ ಕೆಲವು ವರಟೆಗಳು, ಸಿಹಿನೀರಿನಲ್ಲಿರುವ ಟೀಲ್ಸ್ ಎಂಬ ಜಾತಿಯ ಬಾತು ಮುಖ್ಯ. ಇವು ಮೊಟ್ಟೆಯಿಟ್ಟು ಮರಿಮಾಡುವ ಸ್ಥಳಗಳಾದ ಯುರೋಪ್ ಮತ್ತು ಸೈಬೀರಿಯಗಳಲ್ಲಿ ಶೀತಕಾಲದಲ್ಲಿ ನದಿ, ಸರೋವರಗಳ ನೀರು ಹೆಪ್ಪುಗಟ್ಟುತ್ತವೆ. ಇದರಿಂದ ಈ ಪಕ್ಷಿಗಳು ಆಹಾರಾನ್ವೇಷಣೆಗೆ ಸಾವಿರಾರು ಕಿಮೀ. ದೂರವನ್ನು ಕ್ರಮಿಸಿ ರಂಗನತಿಟ್ಟಿಗೆ ಬಂದು ನೆಲೆಸುತ್ತವೆ. ಉತ್ತರ ಭಾರತದಿಂದ ಅಪೂರ್ವಕ್ಕೆ ವಲಸೆಬರುವ ಪಕ್ಷಿಗಳಲ್ಲಿ ಪ್ರಮುಖವಾದದ್ದು ಫ್ಲೆಮಿಂಗೋ. ಈ ಹಕ್ಕಿಗಳ ತೌರು ಗುಜರಾತಿನ ಕಛ್ ಪ್ರದೇಶ. ಆಫ್ಘಾನಿಸ್ಥಾನದ ಉದ್ದನೆ ಬಾಲದ ಹಕ್ಕಿಯೂ ಇಲ್ಲಿಗೆ ವಲಸೆ ಬರುವುದುಂಟು. ಪರ್ವತಗಳಲ್ಲಿ ವಾಸಿಸುವ ನೀಲಗೃದ್ರಗಳೂ ಹಿಮಾಲಯದಿಂದ ರಂಗನತಿಟ್ಟಿಗೆ ಆಗೊಮ್ಮೆ ಈಗೊಮ್ಮೆ ವಲಸೆ ಬರುತ್ತವೆ.

ರಂಗನತಿಟ್ಟು ಒಂದು ಪಕ್ಷಿ ಸರಂಕ್ಷಣಾ ಕೇಂದ್ರವಾಗಿದ್ದು ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಗೆ ಮೇಲ್ವಿಚಾರಣೆಗೆ ಒಳಪಟ್ಟಿದೆ. ಇಲ್ಲಿ ಪಕ್ಷಿಬೇಟೆ ನಿಷಿದ್ಧ. ಪಕ್ಷಿವೀಕ್ಷಣೆಗೆಂದು ಬರುವ ಪ್ರವಾಸಿಗಳಿಗೆ ದೋಣಿವಿಹಾರದ ಮೂಲಕ ದ್ವೀಪಗಳ ಬಳಿಗೆ ಹೊಗಿ ಪಕ್ಷಿವೀಕ್ಷಣೆ ಮಾಡಲು ಅವಕಾಶವಿದೆ. ರಂಗನತಿಟ್ಟು ಪಕ್ಷಿಧಾಮಕ್ಕೆ ಉತ್ತಮ ರಸ್ತೆ ಸೌಲಭ್ಯವಿರುವುದರಿಂದ ಪ್ರವಾಸಿಗರಿಗೂ ಪಕ್ಷಿ ಛಾಯಾಚಿತ್ರ ಗ್ರಾಹಕರಿಗೂ ಇದೊಂದು ಆಕರ್ಷಕ ತಾಣವಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ